ಕನ್ನಡ ರಂಗಭೂಮಿ


ಕನ್ನಡ ರಂಗಭೂಮಿಯ ಉಗಮ ಎಂದು ಹೇಗೆ ಆಯಿತೆಂಬುದು ಸ್ಪಷ್ಟವಾಗಿಲ್ಲವಾದರೂ ಇದರ ಪರಂಪರೆ ಅತ್ಯಂತ ಪ್ರಾಚೀನವಾದದ್ದೆಂಬುದರಲ್ಲಿ ಸಂದೇಹವಿಲ್ಲ. ದೊರೆತಿರುವ ಕನ್ನಡ ನಾಟಕಗಳಲ್ಲಿ ತುಂಬ ಹಳೆಯದು ಚಿಕ್ಕದೇವರಾಜರ ಆಸ್ಥಾನದಲ್ಲಿದ್ದ ಸಿಂಗರಾರ್ಯ ರಚಿಸಿದ ‘ಮಿತ್ರವಿಂದಾ ಗೋವಿಂದ’. ಇದು 17ನೆಯ ಶತಮಾನದ ಅಂತ್ಯಭಾಗದಲ್ಲಿ ರಚಿತವಾದ ಕೃತಿ; ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪ. ಒಂದು ದೃಷ್ಟಿಯಿಂದ, ಇದು ಮೂಲಕೃತಿಯಷ್ಟೂ ತೃಪ್ತಿಕೊಡಲಾರದ ಕನ್ನಡರೂಪವೆಂದು ಹೇಳಬಹುದು. ಇದಕ್ಕಿಂತ ಪ್ರಾಚೀನವಾದ ಕನ್ನಡ ನಾಟಕ ದೊರೆತಿಲ್ಲ ಎನ್ನುವುದರಿಂದಲೇ ಇದಕ್ಕೆ ಹಿರಿಮೆ ಪ್ರಾಪ್ತವಾಗಿದೆ. ದೊರೆತಿಲ್ಲ ಎಂದರೆ ಇರಲಿಲ್ಲ ಎಂದು ಹೇಳಿದಂತಲ್ಲ. ಪ್ರಾಚೀನ ಕನ್ನಡ ಸಾಹಿತ್ಯದ ಶಾಸನಗಳಲ್ಲಿ ನಾಟಕದ ಪ್ರಸ್ತಾಪ ಮತ್ತೆ ಮತ್ತೆ ಕಾಣಸಿಗುತ್ತದೆ.

ಕನ್ನಡ ನಾಡಿನಲ್ಲಿ ಹಿಂದೆ ಅನೇಕ ನಾಟಕ ಶಾಲೆಗಳಿದ್ದುವೆಂದು ತಿಳಿಯಲು ಆಧಾರಗಳಿವೆ. ಮೈಸೂರಿನ ಕಂಠೀರವ ನರಸರಾಜರ (1638-59) ಅರಮನೆಯಲ್ಲಿ ಮನೋಹರವಾದ ನಾಟಕಶಾಲೆ ಇತ್ತೆಂದು ಆ ರಾಜರ ಚರಿತ್ರೆಯನ್ನು ರಚಿಸಿದ ಗೋವಿಂದವ್ಯೆದ್ಯ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಕೆಳದಿಯ ವೆಂಕಟಪ್ಪ ನಾಯಕ (1582-1620) ತನ್ನ ಇಕ್ಕೇರಿಯರಮನೆಯೊಳ್ ಚಿತ್ರಕರ ರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮಿಸಿದನ್’ ಎಂದು ಲಿಂಗಣ್ಣ ಕವಿಯ ಕೆಳದಿನೃಪವಿಜಯದಲ್ಲಿ ಖಚಿತವಾದ ಮಾತಿದೆ. ಅದಕ್ಕಿಂತ ನೂರು ವರ್ಷಗಳ ಹಿಂದೆ, ಕವಿ ರತ್ನಾಕರವರ್ಣಿ ತನ್ನ ಭರತೇಶವೈಭವ ಕಾವ್ಯದ ಪುರ್ವನಾಟಕ ಸಂಧಿ, ಉತ್ತರನಾಟಕ ಸಂಧಿಗಳಲ್ಲಿ ಶೃಂಗಾರಮಯವಾದ ನಾಟಕಶಾಲೆಯ ವರ್ಣನೆಯನ್ನು ಕೊಡುತ್ತಾನೆ.

ನಾಟಕ ಎಂಬ ಮಾತೂ ಕನ್ನಡನಾಡಿನಲ್ಲಿ ತುಂಬ ಹಳೆಯದು. ಗೋವಿಂದವೈದ್ಯ, ರತ್ನಾಕರವರ್ಣಿಗಳ ಕೃತಿಗಳಲ್ಲಿ ನಾಟಕ ಎಂಬ ಪದವೂ ನಾಟಕದ ವರ್ಣನೆಯೂ ಕಂಡುಬರುತ್ತವೆ. 17ನೆಯ ಶತಮಾನದ ಆದಿಭಾಗದಲ್ಲಿದ್ದ ಭಟ್ಟಾಕಳಂಕ. ಕಾವ್ಯನಾಟಕಾಲಂಕಾರಕಲಾಶಾಸ್ತ್ರ ವಿಷಯಾಣಾಂಚ ಬಹೂನಾಂ ಗ್ರಂಥಾನಾಮಪಿ ಭಾಷಾಕೃತಾನಮುಷಲಭ್ಯಮಾನತ್ವಾತ್’-ಎಂದು ಬರೆದಿದ್ದಾನೆ. ಕುಮಾರವ್ಯಾಸ ಕವಿ ನಾಟಕ ಎಂಬ ಮಾತನ್ನು ಅನೇಕ ಕಡೆಗಳಲ್ಲಿ ಉಪಯೋಗಿಸಿದ್ದಾನೆ. ಬಸವಪುರಾಣವನ್ನು ರಚಿಸಿದ ಭೀಮಕವಿ, ‘ಶೃಂಗಾರಗೊಂಡು ಒಡವೆಗಳಿಂದ ಅಲಂಕೃತವಾಗಿ ನಾಟಕಕ್ಕಳವಟ್ಟು ರೀತಿಯೊಳೊಪ್ಪಿ ನಡೆತಂದ ಚದುರೆ’ ಸೋಮಲದೇವಿಯನ್ನು ವರ್ಣಿಸಿದ್ದಾನೆ. ಶೃಂಗಾರ ರತ್ನಾಕರವನ್ನು ರಚಿಸಿದ ಕವಿ ಕಾಮದೇವನೂ ಪೇಳ್ದಭಿನಯಿಸಿ ನಾಟಕಂಗಳನಂತುಂ ಪಡೆದಲ್ಲದೆ ಬರ್ಕುಮೆ ಎಂದು ನಾಟಕದ ಬಗ್ಗೆ ನುಡಿದಿದ್ದಾನೆ. ಮಹಾದೇವಿ, ರೂಪಾದೇವಿ ಎಂಬ ರಾಣಿಯರು ಸೀತೆ-ರಾಮರಾಗಿ ಕೃತಕ ನಾಟಕವನ್ನಾಡಿದ ರೀತಿಯನ್ನು ಪಂಚತಂತ್ರ ಕೃತಿಕಾರ ದುರ್ಗಸಿಂಹ ತಿಳಿಸಿದ್ದಾನೆ. ಹೆಸರಾಂತ ಹೊಯ್ಸಳ ದೊರೆ ವೀರಬಲ್ಲಾಳ ಕಲಾವಂತನಾದ ನಟನಾಗಿದ್ದನೆಂದು ಸೊರಬದ ಶಿಲಾಶಾಸನದಲ್ಲಿ (1208) ಹೇಳಿದೆ. ನೀಲಾಂಜನೆ ನಾಟಕ ಮಾಡಿದುದರ ಬಣ್ಣನೆ ಪಂಪನ ಆದಿಪುರಾಣದಲ್ಲಿದೆ. ಪೊನ್ನಕವಿ ತನ್ನ ಶಾಂತಿಪುರಾಣದಲ್ಲಿ ಚಂದ್ರೋದಯವನ್ನು ನಾಟಕಾರಂಭಕ್ಕೆ ಹೋಲಿಸುತ್ತ, ನಕ್ಷತ್ರಗಳು ಸೂತ್ರಧಾರ ಪುಸಿದ ಪುಷ್ಪಗಳೆಂದೂ ಸರಿದು ಹೋಗುತ್ತಿರುವ ಕತ್ತಲೆಯ ಮೇಲೇರುತಿರುವ ತೆರೆಯೆಂದೂ ರಾತ್ರಿಯ ನಾಲ್ಕು ಪ್ರಹರಗಳು ನಾಟಕದ ನಾಲ್ಕು ಅಂಕಗಳು ಎಂದೂ ವರ್ಣಿಸಿದ್ದಾನೆ. ಅಜಿತಪುರಾಣದ ಕರ್ತೃ ರನ್ನ ಕವಿಯ ಕಾವ್ಯದಲ್ಲಿ ನಾಟಕವಿಧಿಯ ವಿವರಣೆಯನ್ನು ನೋಡಬಹುದು. ನಾಟಕವೆಂಬ ಹೆಸರಿನ ಮನೋರಂಜನೆಯು ಕನ್ನಡ ನಾಡಿನಲ್ಲಿ 10ನೆಯ ಶತಮಾನದಿಂದಲಾದರೂ ಇದ್ದಿತೆಂದು ನಂಬಲು ಇವೆಲ್ಲ ಆಧಾರಗಳುಂಟು.