ಕಾರ್ಯಕ್ರಮಗಳು


2014 - 2015 ಯಶಸ್ವಿ ರಂಗ ಶಿಬಿರಗಳು

 hancihina4hancihina3hancihina2 hancihina1  

ಮೆಚ್ಚುಗೆ ಪಡೆದ ನಾಟಕಗಳು 2014-15 ನೇ ಸಾಲಿನ ಯೋಜನೆಯಂತೆ ಜಿಲ್ಲಾ ಮತ್ತು ವಿಶೇಷ ಘಟಕ ಯೋಜನೆಯ ರಂಗ ಶಿಬಿರಗಳು ಬಾದಾಮಿ ಮತ್ತು ಲೋಕಾಪುರದಲ್ಲಿ ಯಶಸ್ವಿಯಾಗಿ ನಡೆದು ಹಂಚಿನ ಮನೆ ಪರಸಪ್ಪ ಮತ್ತು ಏಕಲವ್ಯ ನಾಟಕಗಳು ಪ್ರದರ್ಶನಗೊಂಡವು. ಪಾರಂಪರಿಕ ವಿಶ್ವ ಖ್ಯಾತಿಯ ಗುಹೆಗಳ ನಗರದ ಬಾದಾಮಿ ಶ್ರೀ ಮಹಾಕೂಟೇಶ್ವರ ಪ್ರಾಥಮಿಕ ಶಾಲೆಯಲ್ಲಿ 15 ದಿನಗಳ ಶಿಬಿರ ವಿನೀತ್‍ಕುಮಾರ ಮತ್ತು ಸರ್ದಾರ್ ಅವರ ನಿರ್ದೆಶನದಲ್ಲಿ ನಡೆಯಿತು. ಯಾವುದೇ ಶಿಸ್ತುಬದ್ಧ ರಂಗ ಅನುಭವ ಇಲ್ಲದ ಮಕ್ಕಳು ಕೇವಲ 15 ದಿನಗಳಲ್ಲಿ ಉತ್ತಮ ನಾಟಕ ಕಲಿತು ಅಭಿನಯಿಸುವುದರೊಂದಿಗೆ ರಂಗಸೂಕ್ಷ್ಮತೆಗಳನ್ನು ಅರಿತರು. ಶಾಲೆಯ ಅಂಗಳದಲ್ಲಿ ಇಲ್ಲದ ಭೇದಗಳನ್ನು ಹುಟ್ಟಿಸಿ ಅವರಲ್ಲಿ ಕೀಳರಿಮೆ ಬಂದು ಅವರ ಪಡುವ ಯಾತನೆಯ ಸೂಕ್ಷ್ಮ ಎಳೆಯನ್ನು ತೋರುವ ನಾಟಕ ಹಂಚಿನಮನೆ ಪರಸಪ್ಪ (ರಚನೆ : ಗಜಾನನ ಶರ್ಮಾ) ತುಂಬ ಮನೋಜ್ಞವಾಗಿ ಮೂಡಿಬಂತು. ನಾಟಕದಲ್ಲಿ ನಾಟಕ ಎಂಬಂತೆ ಮಹಾಭಾರತದ ಸನ್ನಿವೇಶವೊಂದನ್ನು ಅಭಿನಯಿಸುವ ಮಕ್ಕಳ ಮುಗ್ಧತೆ ಮತ್ತು ಶಾಲೆಗಳ ಪ್ರಸ್ತುತ ಸ್ಥಿತಿಯನ್ನು ತೆರೆದಿಟ್ಟ ಮಕ್ಕಳು ಹಾಡಿಗೆ ಸುಶ್ರಾವ್ಯವಾಗಿ ದನಿಯಾಗಿದ್ದು ಮತ್ತು ಸೂಕ್ಷ್ಮವಾಗಿ ಲೇವಡಿ ಎಲ್ಲವೂ ನಾಟಕದ ಯಶಸ್ಸಿಗೆ ಪೂರಕವಾಗಿದ್ದವು. ಶಿಬಿರ ಮತ್ತು ನಾಟಕ ಏನೋ ಮುಗಿಯಿತು, ಆದರೆ ಮಕ್ಕಳಲ್ಲಿ ಅಭಿನಯದ ಗುಂಗು ಬಿಟ್ಟಿಲ್ಲ ಹಾಗೂ ಬದುಕಿನ ಬದಲಾವಣೆಯ ಕ್ಷಣಗಳನ್ನು ಅರಿತು ಇಂದಿಗೂ ಪರಸಪ್ಪನಂಥವರ ಬಗ್ಗೆ ಒಂದು ಕ್ಷಣ ಗಂಭಿರವಾಗಿ ಯೋಚಿಸುವ ಮಟ್ಟಕ್ಕೆ ಹೊರಟಿದ್ದು ಶಿಬಿರದ ಪ್ಲಸ್ ಪಾಯಿಂಟ್ ಎನ್ನಬೇಕು. ಜನೆವರಿಯಲ್ಲಿ ಮುಧೋಳ ತಾಲ್ಲೂಕು ಲೋಕಾಪುರದಲ್ಲಿ ನಡೆದ ವಿಶೇಷ ಘಟಕ ಯೋಜನೆಯ ಶಿಬಿರವಂತೂ ಒಂದು ಹೊಸ ಮನ್ವಂತರವನ್ನೇ ಸೃಷ್ಟಿಸಿತು. ಸುಡಗಾಡು ಸಿದ್ದಿ ಜನಸಮುದಾಯದ ಮಕ್ಕಳು ಅಷ್ಟಾಗಿ ಕನ್ನಡ ಬಾರದ ಮಕ್ಕಳು ಸಿದ್ಧಲಿಂಗಯ್ಯನವರ ಏಕಲವ್ಯ ನಾಟಕವನ್ನು ತುಂಬ ಸರಳವಾಗಿ ಅಭಿನಯಿಸಿದರು. ಒಂದಿಷ್ಟು ರಂಗ ಹಿನ್ನೆಲೆ ಹೊಂದಿದ ಲೋಕಾಪುರದಲ್ಲಿ ಇಂಥ ಪ್ರಯೋಗದ ನಾಟಕ ನೋಡಿ ಖುಷಿಪಟ್ಟರು. ಚಿಕ್ಕಮಗಳೂರು ಎಂ.ವಿನೀತ್, ಜಗದೀಶ ಜಾನಿ, ಡಿಂಗ್ರಿ ನರೇಶ್ ಮತ್ತು ಚಂದ್ರಶೆಖರ್ ಜೆ. ತಂಡ ಮಕ್ಕಳಲ್ಲಿ ಉತ್ತಮ ನೆಲೆಯ ನಾಟಕ ಅಭಿನಯದ ಬೀಜ ಅಂಕುರಕ್ಕೆ ಕಾರಣರಾದರು. ಉತ್ತಮ ಅಭಿನಯ, ಚಲನೆ, ವಸ್ತ್ರ ವಿನ್ಯಾಸ, ಬೆಳಕಿನ ಸೊಬಗು, ಸಂಗೀತದ ಗುಂಗು, ಸಂಭಾಷಣೆಯ ಗಟ್ಟಿತನ ನಾಟಕದ ಯಶಸ್ಸಿಗೆ ಕಾರಣವಾಗಿದ್ದವು. ವಿಶಿಷ್ಟವೆಂದರೆ ಒಂದರೆಡು ಪಾತ್ರಗಳನ್ನು ಬಿಟ್ಟು ಬಹುತೇಕ ಎಲ್ಲ ಪಾತ್ರಗಳನ್ನು ಹೆಣ್ಣು ಮಕ್ಕಳು ಮಾಡಿದ್ದು ಇನ್ನೂ ವಿಶೇಷವಾಗಿತ್ತು. ಪ್ರದರ್ಶನ ಉದ್ಘಾಟನೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಇಂತಹದ್ದೊಂದು ಅವಕಾಶ ನಾಟಕ ಅಕಾಡೆಮಿ ಸಾಮಾನ್ಯ ಗ್ರಾಮವೊಂದಕ್ಕೆ ಕೊಟ್ಟಿದ್ದು ಅದರ ಪ್ರಜಾಪ್ರಭುತ್ವದ ನೆಲೆಯ ಆಡಳಿತಕ್ಕೆ ಸಾಕ್ಷಿ. ಇಮಥ ಶಿಬಿರಗಳು ಮತ್ತೆ ಮತ್ತೆ ನಡೆದ ಉತ್ತಮ ರಂಗಾಭಿರುಚಿ ಮೂಡಿಸುವುದಲ್ಲದೇ ನಾಗರಿಕ ಪ್ರಪಂಚ ಕಟ್ಟಲು ಸುಲಭ ಸಾಧ್ಯ ಎಂದರು. ಒಟ್ಟಾರೆಯಾಗಿ ಮೊದಲ ವರ್ಷವೇ ಅಕಾಡೆಮಿಯ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಆರಂಭಿಸಿದ ತೃಪ್ತಿ ತಮಗಿದ್ದು, ಬರುವ ದಿನಗಳಲ್ಲಿ ಇನ್ನೂ ಅನೇಕ ಚಟುವಟಿಕೆಗಳ ಮೂಲಕ ಅಕಾಡೆಮಿಯ ಕಾರ್ಯಗಳಿಗೆ ಇಂಬು ಕೊಡುವುದು ತಮ್ಮ ಧ್ಯೇಯ ಎಂದು ಸದಸ್ಯ ಎಸ್ಕೆ ಕೊನೆಸಾಗರ ಮನಸಾರೆ ಹೇಳಿದ್ದಾರೆ.


ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಂಗ ರಸಗ್ರಹಣ ಕಾರ್ಯಕ್ರಮ

ಕರ್ನಾಟಕ ನಾಟಕ ಅಕಾಡೆಮಿ ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಂಗ ರಸಗ್ರಹಣ ಕಾರ್ಯಕ್ರಮವನ್ನು 9 ಜನವರಿ 2015ರಂದು ಏರ್ಪಡಿಸಿತು. ಚಿಂತನ ರಂಗ ಅಧ್ಯಯನ ಕೇಂದ್ರ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಿದ್ದ ರಂಗ ತರಬೇತಿ ಶಿಬಿರದಲ್ಲಿ ಸಿದ್ದಗೊಂಡ ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿದ ಚಂದ್ರು ಉಡುಪಿಯವರ ನಿರ್ದೇಶನದ ‘ಪುಷ್ಪರಾಣ’ ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕ ಮುಗಿದ ಮೇಲೆ ವಿದ್ಯಾರ್ಥಿಗಳೊಂದಿಗೆ ರಂಗಸಂವಾದವನ್ನು ನಡೆಸಲಾಯಿತು. ನಟರು, ತಂತ್ರಜ್ಞರು, ನಿರ್ದೇಶಕರು ವಿದ್ಯಾರ್ಥಿಗಳೊಂದಿಗೆ ಪ್ರಯೋಗದ ಕುರಿತು ಅಗತ್ಯ ಮಾಹಿತಿ ನೀಡಿದರು. ಈ ಪ್ರಯೋಗವನ್ನು ಆಧರಿಸಿದಂತೆ ಮತ್ತು ಒಟ್ಟಾರೆ ಮಕ್ಕಳ ರಂಗಭೂಮಿಯ ಕುರಿತು ರಂಗತಜ್ಞರಾದ ಸುಬ್ರಾಯ ಮತ್ತಿಹಳ್ಳಿ (ರಂಗತಂತ್ರಗಳು ಮತ್ತು ಕಲಾವಿದರು), ಮಾಧವಿ ಭಂಡಾರಿ (ಮಕ್ಕಳ ನಾಟಕ ಸಾಹಿತ್ಯ), ಎಂ.ಕೆ.ನಾಯ್ಕ (ಶಿಕ್ಷಣ ಮತ್ತು ರಂಗಭೂಮಿ), ವಿಶ್ವನಾಥ ಹಿರೇಮಠ (ರಂಗಸಂಗೀತ) ಮಕ್ಕಳಿಗೆ ಅಗತ್ಯ ಮಾಹಿತಿ ನೀಡಿದರು. ಶಾಲಾ ಮುಖ್ಯಶಿಕ್ಷಕರು,ಸಹಶಿಕ್ಷಕರು ತುಂಬು ಸಂತಸದಿಂದ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡರು.

rasagrahana3

rasagrahana1

rasagrahana2


ಉತ್ತರಕನ್ನಡ ಜಿಲ್ಲೆಯಲ್ಲಿ ರಂಗ ತರಬೇತಿ ಶಿಬಿರ

ಉತ್ತರಕನ್ನಡ ಜಿಲ್ಲೆಯಲ್ಲಿ ಅಕಾಡೆಮಿಯ ಚಿಂತನ ರಂಗಧ್ಯಯನ ಕೇಂದ್ರದ ಸಹಯೋಗದಲ್ಲಿ 20 ದಿನಗಳ ವಸತಿ ಸಹಿತ ರಂಗತರಬೇತಿ ಶಿರವನ್ನು ಆಯೋಜಿಸಿತು. ಅಕ್ಟೋಬರ್ 5ರಿಂದ 26ರವರೆಗೆ ಹೊನ್ನಾವರ ಸಮೀಪದ ಡಾ.ಆರ್.ವಿ.ಭಂಡಾರಿಯವರ ನೆನಪಿನ ಸಂಸ್ಕೃತಿ ಭವನದಲ್ಲಿ ಈ ತರಬೇತಿಯನ್ನು ನಡೆಸಲಾಯಿತು. ಜಿಲ್ಲೆಯ ಬೇರೆ ಬೇರೆ ಕಡೆಯಿಂದ, ವಿವಧ ರಂಗಸಂಘಟನೆಗಳ 20 ಜನ ಕಲಾವಿದರು ಇಲ್ಲಿ ಬಂದು ಉಳಿದಿದ್ದರು. ಯುವ ನಿರ್ದೇಶಕ ಗಣಪತಿ ಗೌಡ ರಂಗತರಬೇತಿಯ ನಿರ್ದೇಶಕರಾಗಿದ್ದರು. ನಾಗರಿಕ ಪತ್ರಿಕೆಯ ಸಂಪಾದಕರಾದ ರಂಗಕರ್ಮಿ ಕೃಷ್ಣಮೂರ್ತಿ ಹೆಬ್ಬಾರರಿಂದ ಉದ್ಘಾಟನೆಗೊಂಡ ಈ ತರಬೇತಿಯಲ್ಲಿ ದಾಮೋದರ ನಾಯ್ಕ, ಶ್ರೀಪಾದ ಭಟ್, ಕಿರಣ ಭಟ್, ಸತೀಶ ಯಲ್ಲಾಪುರ, ಸುಧಾ ಹೆಗ್ಗಡೆ, ವಿಠ್ಠಲ ಭಂಢಾರಿ ಮುಂತಾದ ರಂಗಕರ್ಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. 20 ದಿನಗಳ ಅವಧಿಯಲ್ಲಿ ಗಣಪತಿ ಗೌಡ ಅವರು ಆರ್.ವಿ.ಭಂಡಾರಿಯವರು ರಚಿಸಿದ್ದ ‘ಯಾನ’ ನಾಟಕವನ್ನು ಸಿದ್ದಪಡಿಸಿದರು. ರಾಮಾಯಣದ ರಾಮನ ಚಲನೆಯ ಜತೆ ಸಾಗುವ ಆರ್ಯರ ಆಕ್ರಮಣದ ಯಾನವನ್ನೂ ಅದೇ ಕಾಲಕ್ಕೆ ವಸಾಹತುಶಾಹಿಯ ಚಲನೆ ಬುಡಕಟ್ಟುಗಳನ್ನು ಆಪೋಷಣ ತೆಗೆದುಕೊಳ್ಳುತ್ತಿರುವ ಬಗೆಯನ್ನೂ ರೂಪಕಾತ್ಮಕವಾಗಿ ಕಟ್ಟಿಕೊಡುವ ಈ ನಾಟಕವನ್ನು ಶಿಬಿರಾರ್ಥಿಗಳು ತುಂಬ ಸುಂದರವಾಗಿ ಅಭಿನಯಿಸಿದರು. ಕೊನೆಯ ದಿನ ನಡೆದ ಸಮಾರೋಪ ಸಮಾರಂಭವನ್ನು ಕನ್ನಡದ ಹಿರಿಯ ಸಾಹಿತಿಗಳಾದ ವಿಷ್ಣುನಾಯ್ಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಕಾಡೆಮಿಯ ಸದಸ್ಯರಾದ ಕಲ್ಪನಾ ನಾಗನಾಥ, ಅನ್ನಪೂರ್ಣಮ್ಮ ಸಾಗರ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಿರಿಯ ಕಲಾವಿದರಾದ ಗಿ.ಡಿ.ಭಟ್ ಕೆಕ್ಕಾರ ವಿಶೇಷ ಆಹ್ವಾನಿತರಾಗಿದ್ದರು. ಚಿಂತನ ರಂಗಧ್ಯಯನ ಕೇಂದ್ರದ ಸಂಚಾಲಕರಾದ ಡಾ.ವಿಠ್ಠಲ ಭಂಡಾರಿ ಹಾಗೂ ಅಕಾಡಿಮಿಯ ಸದಸ್ಯರಾದ ಡಾ. ಶ್ರೀಪಾದ ಭಟ್ ತರಬೇತಿಯ ಜವಾಬ್ದಾರಿಯನ್ನು ಹೊತ್ತಿದ್ದರು. ಜಿಲ್ಲೆಯಲ್ಲಿ ಮೊದಲಬಾರಿಗೆ ಅಕಾಡೆಮಿಯ ಸಹಭಾಗಿತ್ವದಲ್ಲಿ ಇಂತದೊಂದು ಸನಿವಾಸ ರಂಗತರಬೇತಿ ತುಂಬ ಅರ್ಥಪೂರ್ಣವಾಗಿ ನಡೆಯಿತು.


ಯಾನ ನಾಟಕದ ದೃಶ್ಯ

tarabeti1


ರಂಗ ತರಬೇತಿಯ ಸಮಾರೋಪದಲ್ಲಿ ಗುಮಟೆ ವಾದನ ಮಾಡುತ್ತಿರುವ ಶ್ರೀ ವಿಷ್ಣುನಾಯ್ಕರು, (ಎಡದಿಂದ ಬಲಕ್ಕೆ) ಡಾ.ವಿಠ್ಠಲ ಭಂಡಾರಿ, ಗಣಪತಿ ಗೌಡ, ಜಿ.ಡಿ.ಭಟ್ ಕೆಕ್ಕಾರ, ಕಲ್ಪನಾ ನಾಗನಾಥ, ಅನ್ನಪೂರ್ಣಮ್ಮ ಸಾಗರ, ಡಾ.ಶ್ರೀಪಾದ ಭಟ್